Ravindra Jadeja- ವಿಂಡೀಸ್ ವಿರುದ್ಧ ಅಜೇಯ ಶತಕದೊಂದಿಗೆ ಕಪಿಲ್-ಇಮ್ರಾನ್ ಸಾಲಿಗೆ ಸೇರಿದ ಸವ್ಯಸಾಚಿ!

Hero Image
Newspoint
ವೆಸ್ಟ್ ಇಂಡೀಸ್ ವಿರುದ್ಧ ಅಜೇಯ ಶತಕ ಬಾರಿಸುವ ಮೂಲಕ ತಮ್ಮ ಟೆಸ್ಟ್ ಶತಕಗಳ ಗಳಿಕೆಯನ್ನು 6ಕ್ಕೇರಿಸಿಕೊಂಡಿರುವ ರವೀಂದ್ರ ಜಡೇಜಾ ಅವರು ಇದೀಗ ವಿಶ್ವಶ್ರೇಷ್ಠ ಆಲ್ರೌಂಡರ್ ಗಳಾದ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರ ಸಾಲಿಗೆ ಸೇರಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 6 ಮತ್ತು ಅದಕ್ಕಿಂತ ಹೆಚ್ಚಿನ ಶತಕಗಳ ಜೊತೆಗೆ 300ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದ 6ನೇ ಆಲ್ರೌಂಡರ್ ಎಂಬ ಗೌರವಕ್ಕೆ ಇದೀಗ ಪಾತ್ರರಾಗಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನಾಂತ್ಯಕ್ಕೆ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದ್ದು ಈಗಾಗಲೇ 286 ರನ್ ಪ್ರಥಮ ಮುನ್ನಡೆಯೊಂದಿಗೆ ಸುಸ್ಥಿತಿಯಲ್ಲಿದೆ. 104 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 9 ರನ್ ಗಳಿಸಿರುವ ವಾಶಿಂಗ್ಟನ್ ಸುಂದರ್ ಅವರು ಶನಿವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎಲೈಟ್ ಪಟ್ಟಿಗೆ ರವೀಂದ್ರ ಜಡೇಜಾ36 ವರ್ಷದ ರವೀಂದ್ರ ಜಡೇಜಾ ಅವರು 86 ಟೆಸ್ಟ್ ಪಂದ್ಯಗಳಿಂದ 3990 ರನ್ ಮತ್ತು 330 ವಿಕಟ್ ಗಳಿಸಿದ್ದಾರೆ. ಜೊತೆಗೆ ಆರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಈ ಗೌರವಾನ್ವಿತ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಇಯಾನ್ ಬೋಥಮ್ , ಭಾರತದ ಕಪಿಲ್ ದೇವ್, ರವಿ ಅಶ್ವಿನ್, ಪಾಕಿಸ್ತಾನದ ಇಮ್ರಾನ್ ಖಾನ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ಇದ್ದಾರೆ. ರವೀಂದ್ರ ಜಡೇಜಾ ಅವರು ಈ ಪಟ್ಟಿಗೆ ಸೇರ್ಪಡೆಯಾದ ಆರನೇ ಕ್ರಿಕೆಟಿಗರಾಗಿದ್ದಾರೆ.

ಇದೇವೇಳೆ ಈಗ ಮತ್ತೊಂದು ದೊಡ್ಡ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳು ಮತ್ತು 300ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ನಾಲ್ಕನೇ ಕ್ರಿಕೆಟಿರೆನ್ನಿಸಿಕೊಳ್ಳಲು ಅವರಿಗೆ ಕೇವಲ 10 ರನ್ ಗಳಷ್ಟೇ ಬೇಕಾಗಿವೆ. ಪ್ರಸ್ತುತ, ಈ ವಿಶೇಷ ಪಟ್ಟಿಯಲ್ಲಿ ಮೂವರು ಕ್ರಿಕೆಟಿಗರು ಮಾತ್ರ ಇದ್ದಾರೆ. ಭಾರತದ ಕಪಿಲ್ ದೇವ್, ಇಂಗ್ಲೆಂಡ್‌ನ ಇಯಾನ್ ಬೋಥಮ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ಈ ಸಾಧನೆ ಮಾಡಿದವರಾಗಿದ್ದಾರೆ. ಜಡೇಜಾ ಅವರು ಈ ಪಟ್ಟಿಗೆ ಸೇರ್ಪಡೆಯಾದರೆ, ಅದು ಅವರ ವೃತ್ತಿಜೀವನದ ಮತ್ತೊಂದು ದೊಡ್ಡ ಸಾಧನೆಯಾಗಿ ಪರಿಗಣಿಸಲ್ಪಡಲಿದ್ದಾರೆ.

ದ್ವಿಶತಕದ ಜೊತೆಯಾಟಭಾರತ ತಂಡ 218 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ನಂತರ ಕ್ರೀಸಿಗೆ ಆಗಮಸಿದ ರವೀಂದ್ರ ಜಡೇಜಾ ಅವರು ಧ್ರುವ್ ಜ್ಯುರೆಲ್ ಅವರೊಂದಿಗೆ ಐದನೇ ವಿಕೆಟ್‌ಗೆ 206 ರನ್‌ಗಳ ಬೃಹತ್ ಜೊತೆಯಾಟವನ್ನು ಕಟ್ಟಿದರು. ಈ ಜೊತೆಯಾಟದಿಂದಾಗಿ ಭಾರತ ತಂಡ ಟೆಸ್ಟ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಜ್ಯುರೆಲ್ ಅವರು 210 ಎಸೆತಗಳಿಂದ 15 ಬೌಂಡರಿ ಮತ್ತು 3 ಸಿಕ್ಸರ್ ಗಳನ್ನು ಒಳಗೊಂಡ 125 ರನ್‌ಗಳನ್ನು ಗಳಿಸಿದರು ಜಡೇಜಾ ಅವರು 176 ಎಸೆತಗಳಲ್ಲಿ 104 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನಿಂಗ್ಸ್ ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಗಳಿವೆ. ಇದಕ್ಕೂ ಮೊದಲು ಕೆಎಲ್ ರಾಹುಲ್ ಅವರು ಸಹ ಶತಕ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್
  • ವೆಸ್ಟ್ ಇಂಡೀಸ್ 162/10, ಜಸ್ಟಿನ್ ಗ್ರೀವ್ಸ್ 32, ಶೈ ಹೋಪ್ 26, ರೋಸ್ಟನ್ ಚೇಸ್ 24, ಸಿರಾಜ್ 40ಕ್ಕೆ 4, ಬುಮ್ರಾ 42ಕ್ಕೆ 3, ಕುಲ್ದೀಪ್ 25ಕ್ಕೆ 2
  • ಭಾರತ ಪ್ರಥಮ ಇನ್ನಿಂಗ್ಸ್ 448/5, ಕೆಎಲ್ ರಾಹುಲ್ 100, ಧ್ರುವ ಜ್ಯುರೆಲ್ 125, ರವೀಂದ್ರ ಜಡೇಜಾ ಅಜೇಯ 104, ವಾಶಿಂಗ್ಟನ್ ಸುಂದರ್ 9, ರೋಸ್ಟನ್ ಚೇಸ್ 90ಕ್ಕೆ 2, ಜೇಡನ್ ಸೀಲ್ಸ್ 53ಕ್ಕೆ 1, ಜೋಮೆಲ್ ವಾರಿಕನ್ 102ಕ್ಕೆ 1.